ಅಭಿನವಮಂಗರಾಜ		
	
ಮಂಗರಸ ಎಂಬ ಹೆಸರಿನ ನಾಲ್ಕು ಕವಿಗಳಲ್ಲಿ ಒಬ್ಬ. ವಿಜಯನಗರದ ಒಂದನೆಯ ಹರಿಹರರಾಯನ ಸಮಕಾಲೀನನಾದ ಮಂಗರಸನೇ ಮೊದಲನೆಯವ. ಇವನ ಅನಂತರ ಇದ್ದವನಾದ ಎರಡನೆಯ ಮಂಗರಸ ತನ್ನನ್ನು ಅಭಿನವಮಂಗರಸ (ಮಂಗರಾಜ) ಎಂದು ಕರೆದುಕೊಂಡಿದ್ದಾನೆ. ಮೊದಲನೆಯವನು ಜೈನಕವಿ, ಎರಡನೆಯವನು ಬ್ರಾಹ್ಮಣಕವಿ. ಇಬ್ಬರೂ ಶಾಸ್ತ್ರಕವಿಗಳು. ಅಭಿನವ ಮಂಗರಾಜ ಕಮ್ಮೆಕುಲಕ್ಕೆ ಸೇರಿದವ. ವಿಶ್ವಾಮಿತ್ರಗೋತ್ರೋದ್ಭವ, ತಂದೆ ರೆಮ್ಮಾರ್ಯ ರಾಮರಸೇ ಈತನು ತನ್ನನ್ನು ಸೋಮೇಶನೊಲಿದಿತ್ತನಾಹತಮತಿಯ ಕುರುಪಿನಭಿನವಮಂಗ ಎಂದು ವಿಶ್ಲೇಷಿಸಿ ಹೇಳಿಕೊಂಡಿದ್ದಾನೆ. ಈತನಿಗೆ ಅಭಿನವಬಾಲಸರಸ್ವತಿ, ಬಾಲಶಾರದೆ ಎಂಬ ಬಿರುದುಗಳಿದ್ದಂತೆ ತಿಳಿದುಬರುತ್ತದೆ.
	
ಈ ಕವಿ ಅಭಿನವನಿಘಂಟನ್ನು ಬರೆದಿದ್ದಾನೆ. ಇದಕ್ಕೆ ಮಂಗಾಭಿಧಾನವೆಂಬ ಹೆಸರೂ ಇದೆ. ಇದನ್ನಲ್ಲದೆ ಚಿಂತಾಮಣಿ ಪ್ರತಿಪದ ಎಂಬ ಇನ್ನೊಂದು ಹೊತ್ತಿಗೆಯನ್ನೂ ಬರೆದಂತೆ ತಿಳಿದುಬರುತ್ತದೆಯಾದರೂ ಗ್ರಂಥ ದೊರೆತಿಲ್ಲ. ಮಂಗರಾಜ ತನ್ನ ಅಭಿನವನಿಘಂಟನ್ನು ಸ್ತ್ರೀಬಾಲರ-ವಂತುಟು ಸುಲಭವಾಗಿ ಸಿದ್ಧಪಡಿಸಿರುವದಾಗಿ ಹೇಳಿಕೊಂಡಿದ್ದಾನೆ. ತನಗಿಂತಲೂ ಹಿಂದೆ ಸಂಸ್ಕøತ ಮತ್ತು ಕನ್ನಡ ಭಾಷೆಗಳಲ್ಲಿ ಇದ್ದ ನಿಘಂಟುಕಾರರನ್ನು ಸ್ಮರಿಸಿ, ಅವರ ಹಿರಿಯ ಉದಾತ್ತಗುಣಗಳನ್ನು ಮುಂದಿಟ್ಟುಕೊಂಡು ಮಂಗಾಭಿಧಾನವನ್ನು ರೂಪಿಸಿರುವುದಾಗಿ ಗ್ರಂಥಾರಂಭದಲ್ಲಿ ನಿರೂಪಿಸಿದ್ದಾನೆ. ಈ ಶಬ್ದಕೋಶವನ್ನು ಶಕ 1320ರಲ್ಲಿ, ಅಂದರೆ 1398ರಲ್ಲಿ ಬರೆದಿರುವುದಾಗಿ ಆತನೇ ತಿಳಿಸಿದ್ದಾನೆ.
	
ಅಭಿನವನಿಘಂಟಿನ ರಚನೆಗೆ ವಿಶೇಷವಾಗಿ ನಾಗವರ್ಮನ ಪದಕೋಶವನ್ನು ಮಾದರಿಯಾಗಿಟ್ಟುಕೊಂಡಿರುವಂತೆ ತೋರುತ್ತದೆ. ಇದು ಉದ್ದಂಡಷಟ್ಪದಿಯಲ್ಲಿ ರಚಿತವಾಗಿದೆ. ಇದರಲ್ಲಿ ಸ್ವರ್ಗ, ಭೂ, ಪಾತಾಳ, ಸಾಮನ್ಯಾರ್ಥ ಮತ್ತು ನಾನಾರ್ಥ ಎಂಬ ಐದು ಕಾಂಡಗಳಿವೆಯಲ್ಲದೆ ಅದರಲ್ಲಿ ಒಂದೊಂದು ಕಾಂಡವೂ ಬೇರೆಬೇರೆ ವರ್ಗಗಳಾಗಿ ನಿಭಾಗವಾಗಿವೆ. ಇಲ್ಲಿ ಸಂಸ್ಕøತಭಾಷೆಯ ಶಬ್ದಗಳಿಗೆ ಕನ್ನಡದ ಅರ್ಥವಿದೆ.
	
ನಿಘಂಟು ಎಂಬುದು ಹಡೆದ ತಾಯಂತೆ ಅಲಂಕಾರದ ಅಂದವನ್ನೂ ತಂದೆಯಂತೆ ಲಕ್ಷಣಸುಶಬ್ದವನ್ನೂ ಒಡೆಯನಂತೆ ಪದಗಳ ಅರ್ಥವನ್ನೂ ಅಂಗನೆಯಂತೆ ಭಾವರಸಗಳನ್ನೂ ಗುರುವಿನಂತೆ ವ್ಯಾಕರಣ ವೈಶಿಷ್ಟ್ಯವನ್ನೂ ಒಡನಾಡಿಯಂತೆ ಸಾರಾಂಶವನ್ನೂ ಕೊಡುತ್ತದೆ ಎಂದು ಮಂಗರಾಜ ಒಂದು ಕಡೆ ಹೇಳಿರುವ ಮಾತು ಗಮನಾರ್ಹವಾಗಿದೆ. ಅದರಿಂದಾಗಿ ಅಭಿನವಮಂಗನುಸಿರ್ದ ಸತ್ಕವಿತೆಯಂ ಜವರಾರ್, ಮವರಾರ್ ಮಿಕ್ಕರೋಲ್ ಮನುಜ ಶಿಕ್ಷಾಪೇಕ್ಷೆಯಿಂದಾದನೇ ಎಂಬುದು ಕವಿಯ ಪ್ರಶಸ್ತಿರೂಪದ ಅಗ್ಗಳಿಕೆಯ ಆಶಯ. ನಿಘಂಟುಕಾರನ ಸದಾಶಯ ಸಾಕಷ್ಟುಮಟ್ಟಿಗೆ ಸಾರ್ಥಕವಾಗಿದೆ.				
(ಎಚ್.ಪಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ